ತೈಲ -
	ಕಲ್ಯಾಣ ಚಾಳುಕ್ಯ ವಂಶದ ಅರಸರ ಹೆಸರುಗಳಲ್ಲೊಂದು.

ತೈಲ 1: ಕಲ್ಯಾಣದ ಚಾಳುಕ್ಯ ವಂಶದ ಆಳ್ವಿಕೆಯನ್ನು ಸ್ಥಾಪಿಸಿದ ಇಮ್ಮಡಿ ತೈಲಪನಿಗೆ ಹಿಂದೆ ಆದರೆ 2 ನೆಯ ಕೀರ್ತಿವರ್ಮನ ಅನಂತರ ಇದ್ದವರಲ್ಲೊಬ್ಬ.  ಇವನ ವಿಚಾರ ನಮಗೇನೂ ಖಚಿತವಾಗಿ ತಿಳಿದು ಬಂದಿಲ್ಲ. ಕವಿ ರನ್ನನ ಹಾಗೂ ಶಾಸನಗಳ ಪ್ರಕಾರ ಇವನು 1 ನೆಯ ಭೀಮನ ಮೊಮ್ಮಗ. ತನ್ನನ ಪ್ರಕಾರ 2 ನೆಯ ಭೀಮ ಈತನ ಮಗ. ಶಾಸನಗಳಲ್ಲಿ 3 ನೆಯ ವಿಕ್ರಮಾದಿತ್ಯ 1 ನೆಯ ತೈಲನ ಮಗನೆಂದು ಹೇಳಲಾಗಿದೆ.

ತೈಲ 2: 973 - 997. ಕಲ್ಯಾಣ ಚಾಳುಕ್ಯ ಮನೆತನದ ಆಳ್ವಿಕೆಯ ಸ್ಥಾಪಕ. ಶಾಸನಗಳಲ್ಲಿ ಇವನನ್ನು ತೈಲಪ, ತೈಲಪಯ್ಯ, ತೈಲಪ್ಪ ಮತ್ತು ನೂರ್ಮಡಿ ತೈಲ ಎಂದು ಹೆಸರಿಸಲಾಗಿದೆ. ಅಹವಮಲ್ಲ, ಸತ್ಯಾಶ್ರಯಕುಲತಿಲಕ, ಚಾಳಕ್ಯ ರಾಮಮಹಾರಾಧಿರಾಜ, ಪರಮಭಟ್ಟಾರಕ - ಇವು ಈತನ ಕೆಲವು ಬಿರುದುಗಳು, ಇವನ ತಂದೆ 4 ನೆಯ ವಿಕ್ರಮಾದಿತ್ಯ; ತಾಯಿ ಬೊಂತಾದೇವಿ. ಈಕೆ ಚೇದಿ ಅರಸರ ಲಕ್ಷ್ಮಣನ ಮಗಳು. ತೈಲನ ಹೆಸರು ಪ್ರಪ್ರಥಮವಾಗಿ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಳ್ವಿಕೆಯಲ್ಲಿ ಕಾಣಬರುತ್ತದೆ. 957ರ ಕಾರ್ಜೊಳ ಶಾಸನದಲ್ಲಿ ತೈಲಪನನ್ನು ರಾಷ್ಟ್ರಕೂಟ ಮುಮ್ಮಡಿ ಕೃಷ್ಣ ಪಾದಪದ್ಮೋಪಜೀವಿಯೆಂದು ಕರೆಯಲಾಗಿದೆ.  ಈತ ರಾಷ್ಟ್ರಕೂಟ ಸಾಮಂತನಾಗಿ ತರ್ದವಾಡಿ - 1000 ಪ್ರಾಂತ್ಯವನ್ನು ಆಳುತ್ತಿದ್ದನೆಂದು 965 ರ ಶಾಸನವೊಂದರಿಂದ ತಿಳಿಯುತ್ತದೆ. ತೈಲಪ ಬಲು ಬೇಗ ತನ್ನ ಸ್ಥಾನವನ್ನೂ ಬಲವನ್ನೂ ಬೆಳೆಸಿಕೊಂಡ. ಕೃಷ್ಣನ ಮರಣಾನಂತರ ರಾಷ್ಟ್ರಕೂಟ ಸಿಂಹಾಸನಕ್ಕೆ ಬಂದ ರಾಜರು ದುರ್ಬಲರಾಗಿದ್ದರು. ಅಂಥ ಸಮಯವನ್ನು ಕಾಯುತ್ತಿದ್ದ ಪರಮಾರ ಸೀಯಕ ಹರ್ಷ 972 ರಲ್ಲಿ ಮಾನ್ಯಖೇಟವನ್ನು ಮುತ್ತಿದ. ಗಂಗ ಮಾರಸಿಂಹ ಆತನನ್ನು ಸೋಲಿಸಿದ. ರಾಷ್ಟ್ರಕೂಟ ಸಂತತಿ ಅಸ್ತಂತವಾಗುವುದನ್ನು ನೀರಿಕ್ಷಿಸಿದ ತೈಲ 973 ರಲ್ಲಿ ಮಾನ್ಯಖೇಟವನ್ನು ಮತ್ತಿ ಕಕ್ಕನನ್ನು ಸೋಲಿಸಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದ.

ರಾಜನಾದ ಕೂಡಲೇ ಅನೇಕ ಯುದ್ಧಗಳನ್ನು ಎದುರಿಸಬೇಕಾಯಿತು. ರಾಷ್ಟ್ರಕೂಟರ ಮಿತ್ರರಾಜರಲ್ಲಿ ಅನೇಕರು ಇವನನ್ನು ವಿರೋಧಿಸಿದರು. ತಲಕಾಡಿನ ಗಂಗರು ಅವರಲ್ಲಿ ಮುಖ್ಯವಾದವರು. ಮಾರಸಿಂಹನ ಮರಣಾನಂತರ ಗಂಗ ಸಿಂಹಾಸನಕ್ಕಾಗಿ ಅಂತಃಕಲಹಗಳು ಪ್ರಾರಂಭವಾದವು. ತೈಲಪ 975 ರ ವೇಳೆಗೆ ಗಂಗ ದೊರೆ ಪಾಂಚಲದೇವನನ್ನು ಸೋಲಿಸಿ ಅದರ ಕುರುಹಾಗಿ ಪಾಂಚಾಲ ಮರ್ದನ ಮತ್ತು ಪಂಚಾನನ ಎಂಬ ಬಿರುದುಗಳನ್ನು ಧರಿಸಿದ. ರಾಷ್ಟ್ರಕೂಟರ ಆಪ್ತರಾಗಿದ್ದ ಇತರ ಸಾಮಂತರನ್ನು ಸೋಲಿಸಿ ತನ್ನ ಅಧಿಕಾರವನ್ನು ಭದ್ರಪಡಿಸಿಕೊಂಡ.

902 ರಲ್ಲಿ ತೈಲಪ ಅನಂತಪುರ ಜಿಲ್ಲೆಯ ರೊಡ್ಡ ಎಂಬಲ್ಲಿ ಚೋಳ ಬಲವನ್ನು ಸೋಲಿಸಿ ಅವರ 150 ಆನೆಗಳನ್ನು ವಶಪಡಿಸಿಕೊಂಡ.

ತೈಲಪ ಚೋಳರೊಡನೆ ಯುದ್ಧಗಳಲ್ಲಿ ತೊಡಗಿದ್ದಾಗ ಉತ್ತರದ ರಾಜರು ಪ್ರಬಲರಾಗಿ ಚಾಳುಕ್ಯ ಸಾಮ್ರಜ್ಯದ ಗಡಿಗಳನ್ನು ಆಕ್ರಮಿಸಲು ಯತ್ನಿಸಿದರು.  ಅದರಲ್ಲಿ ಸೀಯಕ ಹರ್ಷನ ಉತ್ತರಾಧಿಕಾರಿಯಾಗಿದ್ದ ಪರಮಾರ ಮುಂಜ ಪ್ರಮುಖ. ಉತ್ಪಲ ಎಂಬ ರಾಜನನ್ನು ಸೋಲಿಸಿ ತೈಲಪ ಮುಂಜನನ್ನು ಎದುರಿಸಿ ಸೋಲಿಸಿದ. ಇದು ತೈಲಪನ ಮಹತ್ಸಾಧನೆ.
ಮಾನ್ಯಖೇಟ ಮತ್ತು ಕಲ್ಯಾಣ ಇವನ ರಾಜಧಾನಿಗಳಾಗಿದ್ದವೆಂದು ಕಾಣುತ್ತದೆ. ರಾಷ್ಟ್ರಕೂಟ 2 ನೆಯ ಕೃಷ್ಣನ ಮಗಳು ಜಾಕವ್ವೆ (ಜಾಕಲಬ್ಬೆ) ಎಂಬುವವಳನ್ನು ಈತ ವಿವಾಹವಾಗಿದ್ದ. ಸತ್ಯಾಶ್ರಯ ಮತ್ತು ದಶವರ್ಮ (ಯಶೋವರ್ಮ) ಇವನ ಮಕ್ಕಳು. ಚೋಳ ಮತ್ತು ಪರಮಾರರ ವಿರುದ್ಧ ನಡೆದ ಕದನಗಳಲ್ಲ ಸತ್ಯಾಶ್ರಯ. ಭಾಗವಹಿಸಿದ್ದಂತೆ ತಿಳಿದುಬರುತ್ತದೆ. 997 ರಲ್ಲಿ ತೈಲ ಮರಣ ಹೊಂದಿದಾಗ ಅವನ ಹಿರಿಯ ಮಗ ಇರಿವ ಬೆಡಂಗ ಸತ್ಯಾಶ್ರ ಅಧಿಕಾರಕ್ಕೆ ಬಂದ.			(ಜಿ.ಆರ್.ಆರ್)

ಕನ್ನಡದ ಪ್ರಸಿದ್ಧ ಕವಿ ರನ್ನ ತೈಲಪನ ಆಶ್ರಯದಲ್ಲಿದ್ದವ. ಅವನು ಸು. 990 ರಲ್ಲಿ ತೈಲನ ಆಸ್ಥಾನವನ್ನು ಪ್ರವೇಶಿಸಿದವನೆಂದೂ ತೈಲಪನಿಂದ 991 - 2 ರಲ್ಲಿ ಕವಿಚಕ್ರವರ್ತಿ ಎಂಬ ಬಿರುದು  ಪಡೆದಿದ್ದಿರಬೇಕೆಂದೂ ವಿದ್ವಾಂಸರ ಊಹೆ. ರನ್ನ ತನ್ನ ಕೃತಿಗಳಾದ ಅಜಿತತೀರ್ಥಂಕರ ಪುರಾಣತಿಲಕ ಮತ್ತು ಸಾಹಸಭೀಮವಿಜಯ (ಗದಾಯುದ್ಧ) ಗ್ರಂಥಗಳಲ್ಲಿ ತೈಲಪನ ಬಗ್ಗೆ ಕೆಲವು ವಿವರಗಳನ್ನು ಕೊಟ್ಟಿದ್ದಾನೆ. ಗದಾಯುದ್ಧದಲ್ಲಿ ಅನೇಕ ಐತಿಹಾಸಿಕ ಅಂಶಗಳನ್ನು ಸೇರಿಸಿದ್ದಾರೆ.
ತೈಲ 3: 1149 - 1162 ರಲ್ಲಿ ಆಳುತ್ತಿದ್ದ ಕಲ್ಯಾಣ ಚಾಳುಕ್ಯ ದೊರೆ. ಮೂರನೆಯ ಸೋಮೇಶ್ವರನ ಕಿರಿಯ ಮಗ. ಅಣ್ಣನಾದ ಪೆರ್ಮಜಗದೇಕಮಲ್ಲನ ಅನಂತರ ಈತ ಪಟ್ಟಕ್ಕೆ ಬಂದ. ತ್ರಿಭುವನ ಮಲ್ಲ, ತ್ರೈಲೋಕ್ಯಮಲ್ಲ ಎಂಬುವು ಇವನ ಬಿರುದುಗಳು. ನೂರ್ಮಡಿ ತೈಲಪ, ತೈಲಪ, ಚಾಳುಕ್ಯ ಚಕ್ರವರ್ತಿ ರಕ್ಕಸಗಂಗ, ತ್ರಿಭುವನಮಲ್ಲ ವೀರಗಂಗ ಎಂದೂ ಇವನ ಬಗ್ಗೆ ಉಲ್ಲೇಖಗಳುಂಟು. ತ್ರೈಲೋಕ್ಯಮಲ್ಲ ಎಂಬುದೇ ಈತನ ಹೆಚ್ಚು ಪ್ರಸಿದ್ಧವಾದ ಬಿರುದು. ತೈಲ ಸಿಂಹಾಸನವನ್ನೇರಿದ ಮೇಲೆ ಕಳಚೂರಿ ಬಿಜ್ಜಳ ಕ್ರಮಕ್ರಮವಾಗಿ ಪ್ರಬಲನಾಗತೊಡಗಿದ. 1153 ರ ವೇಳೆಗೆ ಇವನು ಸ್ವಾತಂತ್ರ್ಯ ಘೋಷಿಸಿಕೊಂಡ. ತೈಲನ ದೌರ್ಬಲ್ಯದಿಂದ ಶಿಲಾಹಾರರೂ ಕಾಕತೀಯರೂ ಸ್ವತಂತ್ರರಾದರು. ಇವರ ಶಾಸನಗಳ್ಲಿ ತೈಲಕ ಉಲ್ಲೇಖ ಇಲ್ಲಿದರುವುದು ಗಮನಾರ್ಹ. ತೈಲನ ಉಲ್ಲೇಖವಿರುವ ಶಾಸನಗಳು ಬಹುತೇಕ ಅವನ ರಾಜ್ಯದ ಮಧ್ಯದ ಪ್ರದೇಶಗಳಿಗೇ ಸೀಮಿತವಾಗಿರುವುದರಿಂದ ತೈಲನ ಆಡಳಿತ ಅತ್ಯಂತ ಸೀಮಿತವಾಗಿತ್ತೆಂಬುದು ವ್ಯಕ್ತವಾಗುತ್ತದೆ. ಹೊಯ್ಸಳ 1 ನೆಯ ನರಸಿಂಹನೂ ತೈಲನ ಸಾರ್ವಭೌಮತ್ವವನ್ನು ಒಪ್ಪಿಕೊಂಡಿರಲಿಲ್ಲ. 1152 ಚಾಳುಕ್ಯ ದಂಡನಾಯ ಮಹಾದೇವರಸನ ವಿರುದ್ಧವಾದ ಪಕ್ಷವನ್ನು ಅವನು ಸೇರಿ ಬನವಾಸಿಯವರೆಗೂ ಮುಂದುವರಿದ. ತೈಲ 1162 ರ ಕೊನೆಯ ವರಗೂ ಆಳ್ವಿಕೆ ನಡೆಸಿದನೆಂದು ಕಾಣುತ್ತದೆ. ಕಾಕತೀಯ ರುದ್ರದೇವನಿಗೆ ಅಂಜಿ ರೋಗಗ್ರಸ್ತನಾಗಿ ಈತ ತೀರಿಕೊಂಡನೆಂದು 1163 ರ ಅನ್ಮಕೊಂಡ ಶಾಸನದಲ್ಲಿ ಹೇಳಲಾಗಿದೆ. 1162 ರ ವೇಳೆಗೆ ಬಿಜ್ಜಳ ಇಡೀ ಚಾಳುಕ್ಯ ರಾಜ್ಯದ ಪ್ರಭುವೆಂದು ಸಾರಿಕೊಂಡ. ಆತ ಚಾಳುಕ್ಯ ಮನೆತನದ ಅನೇಕರನ್ನು ವಧಿಸಿದನೆಂದು ಬಿಜ್ಜಳನ ಮಗ ಸೋವಿದೇನದ ಹರಸೂರು ಮತ್ತು ಕಾಳಗಿ ಶಾಸನಗಳಲ್ಲಿ (1172 - 73) ಹೇಳಲಾಗಿದೆ. ಹೀಗೆ ಸಾವಿಗೆ ಈಡಾದವರಲ್ಲಿ ಬಹುಶಃ 3 ನೆಯ ತೈಲನೂ ಒಬ್ಬನಾಗಿದ್ದಿರಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ